ನೃತ್ಯದಲ್ಲಿ ಶೃಂಗಾರ

Abstract

ಕರ್ನಾಟಕ ಕಾಣುತ್ತಿರುವ ಅತ್ಯುತೃಷ್ಟ ನೄತ್ಯಗುರುಗಳಲ್ಲಿ, ಸಂಘಟಕರಲ್ಲಿ, ಹಿರಿಯ ಕಲಾವಿದರಲ್ಲಿ ಡಾ. ಲಲಿತಾ ಶ್ರೀನಿವಾಸನ್ ಅವರಿಗೆ ಅಗ್ರಸ್ಥಾನವಿದೆ. ಹೀಗೆಂದು ನಾನು ಹೇಳುವುದಲ್ಲ, ಇಡಿಯ ನೃತ್ಯಪ್ರಪಂಚವೇ ಹೇಳುತ್ತದೆ. ಇವರ ನಿರ್ದೇಶಕತ್ವದಲ್ಲಿ ೧೯೭೮ರಲ್ಲಿ ಕರ್ನಾಟಕ ನೃತ್ಯಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಳಕಿಂಡಿಯಂತೆ ಜನ್ಮಿಸಿದ ನೂಪುರ ನೃತ್ಯಸಂಸ್ಥೆಯ ಮೂಲಕ ಅನೇಕ ಕಲಾವಿದರು ರೂಪುಗೊಂಡಿದ್ದಾರೆ. ಇಡಿಯ ಬೆಂಗಳೂರಿಗೆ ಅಷ್ಟೇಕೆ, ಇಡಿಯ ಕರ್ನಾಟಕಕ್ಕೆ ಮೊದಮೊದಲ ರಾಷ್ಟ್ರೀಯ ವ್ಯಾಪ್ತಿಯ ನೃತ್ಯ್ಯೋತ್ಸವದ ಪರಿಕಲ್ಪನೆಯನ್ನು ಕೊಟ್ಟದ್ದು ಇವರಿರಬೇಕೆಂದರೆ ಇವರ ದೂರದರ್ಶಿತ್ವಕ್ಕೆ ಬೇರೆ ಕನ್ನಡಿ ಬೇಕೇನು? ಚಿತ್ರಾಂಗದ, ಶ್ರೀಕೃಷ್ಣ ಪಾರಿಜಾತ, ಲಾಸ್ಯೋತ್ಸವ, ಪ್ರೇಮ ಭಕ್ತಿ ಮುಕ್ತಿ, ಕೌಶಿಕ ಸುಕೃತಂ, ಗೌಡರ ಮಲ್ಲಿ, ದೇವ ಕನ್ನಿಕೆ, ಅನ್ವೇಷಣೆ,ನಿಶಾ ವಿಭ್ರಮ ಮುಂತಾದ ನೃತ್ಯರೂಪಕಗಳ ಹೆಸರಿನಲ್ಲೇ ತಿಳಿಯುತ್ತದೆ ಅವುಗಳ ರಚನೆ, ವಿನ್ಯಾಸ ಎಷ್ಟೊಂದು ವಿಶಿಷ್ಟವೆಂದು. ಇದಷ್ಟೇ ಅಲ್ಲದೆ ಅಂಗಭಾವ, ಕಾವ್ಯನೃತ್ಯ, ಸುಳಾದಿಗಳನ್ನು ಪುನರ್ ನವೀಕರಿಸುವಲ್ಲಿ ಅವರು ಮಾಡಿದ ಸುಲಲಿತ ನೃತ್ಯಗಳು, ಯು‌ಎಸ್‌ಎಯ ವೆಸ್ಲೇಯನ್ ವಿಶ್ವವಿದ್ಯಾನಿಲಯದಲ್ಲಿ ಅವರು ನಡೆಸಿದ ಅಧ್ಯಯನ,ಸಹೃದಯರಿಂದಲೂ, ಸರ್ಕಾರಗಳಿಂದಲೂ ಮಾನ್ಯತೆ ಪಡೆದಿದೆ. ಇವಕ್ಕೆಲ್ಲದಕ್ಕೂ ಅವರಿಗೆ ದಕ್ಕಿದ ಗುರುಪರಂಪರೆಯ ಪೋಷಣೆಯೇ ಕಾರಣ. ಕರ್ನಾಟಕ ನೃತ್ಯಪರಂಪರೆಯ ಶಕಪುರುಷರೆಂದೇ ಗಣಿಸಬಹುದಾದ ಕೇಶವಮೂರ್ತಿ, ಡಾ. ಕೆ.ವೆಂಕಟಲಕ್ಷಮ್ಮ, ಮೂಗೂರು ಜೇಜಮ್ಮರ ಶಿಷ್ಯೆ ಎಂದ ಮೇಲೆ ಕೇಳಬೇಕೇನು? ಬಿಜಾಪುರದ ಮಹಿಳಾ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನೂ ೨೦೧೪ ಪಡೆದಿದ್ದಾರೆಂದ ಮೇಲೆ ಇದು ಇಳಿಜವ್ವನವೇ? ಅವರೊಳಗಿನ ಅಧ್ಯಯನದ ಪ್ರೀತಿ ಎಷ್ಟೆಂದರೆ ನನ್ನಂತಹ ಕಿರಿಯರದೆಷ್ಟೋ ಮಂದಿಗೂ ಎಷ್ಟೋ ಸಲ ಮನೆ ಬಾಗಿಲನ್ನು ತೆರೆದು ತಮ್ಮ ಚಿಂತನೆಗಳನ್ನು, ಪುಸ್ತಕಗಳನ್ನು ಹಂಚಿಕೊಂಡು ಓದಿಸಿ, ತಿಳಿಸಿ ಮಾರ್ಗದರ್ಶನ ಮಾಡಿ, ಕಿರಿಯರ ಪ್ರಯತ್ನಗಳಿಗೆ ಮುಕ್ತವಾಗಿ ಪ್ರೋತ್ಸಾಹಿಸಿ ಬೆಳೆಸುವವರು. ಕರ್ನಾಟಕದ ನೃತ್ಯ ಮತ್ತು ಶಿಲ್ಪ ಹಾಗೂ ತಮ್ಮ ಗುರು ವೆಂಕಟಲಕ್ಷಮ್ಮ ಅವರ ಜೀವನ ಪರಿಚಯವನ್ನೀಯುವ ಇವರ ಈ ಎರಡು ಪುಸ್ತಕಗಳನ್ನು ಸಂಗೀತ ನೃತ್ಯ ಅಕಾಡೆಮಿಯೇ ಪ್ರಕಾಶಿಸಿದೆ.೨೦೦೮-೨೦೧೩ರ ವರೆಗಿನ ಅವಧಿಗೆ ಕರ್ನಾಟಕ ನೃತ್ಯಕಲಾ ಪರಿಷತ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದಾರೆ. ಶಿರೋಮಣಿ, ನೃತ್ಯದ ಮೂಲಕ ರಾಷ್ಟ್ರೀಯ ಭಾವೈಕ್ಯತೆಗಾಗಿ ಪ್ರಿಯದರ್ಶಿನಿ ಪ್ರಶಸ್ತಿ, ಸಂಗೀತ ನೄತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾತಿಲಕ, ನಾಟ್ಯರಾಣಿ ಶಾಂತಲಾ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ, ಗಾಯನ ಸಮಾಜದಿಂದ ವರ್ಷದ ವ್ಯಕ್ತಿ, ರುಕ್ಮಿಣಿದೇವಿ ಅರುಂಡೇಳ್ ಸ್ಮರಣಾರ್ಥ ಪ್ರಶಸ್ತಿ, ಇಂದಿರಾ ಗರಿಯಾಲಿ ಪ್ರಶಸ್ತಿ, ಸೃಷ್ಟಿ ಜೀವiನಸಾಧನ, ಅಜಂತ ವಿಶ್ವನಾಟ್ಯರತ್ನ, ಕಲೈಮಗಳ ಸಭಾ, ವರ್ಲ್ಡ್ ಡ್ಯಾನ್ಸ್ ಅಲೈಯನ್ಸ್, ನೃತ್ಯಕಲಾ ಪರಿಷತ್, ಮಹಾರಾಣಿ ಕಾಲೇಜು, ದೃಷ್ಟಿ ಫೌಂಡೇಶನ್, ಅನನ್ಯ, ಎಂಇ‌ಎಸ್ ಕಲಾವೇದಿಗಳಿಂದ ಸನ್ಮಾನಗಳನ್ನೂ ನೃತ್ಯಸುಂದರಿ, ನಾಟ್ಯಕುಲೋತ್ತುಂಗ ಬಿರುದು ಪುರಸ್ಕಾರಗಳನ್ನೂ ಸ್ವೀಕರಿಸಿದ್ದಾರೆ. ಹಲವಾರು ಕಾರ್ಯಾಗಾರ, ಕಮ್ಮಟಗಳನ್ನೂ ನಡೆಸಿರುವ ಇವರು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ. ಪ್ರತಿಷ್ಠಿತ ಸಭಾ, ಅಕಾಡೆಮಿಗಳಲ್ಲಿ ಉಪನ್ಯಾಸ- ಪ್ರಾತ್ಯಕ್ಷಿಕೆಗಳನ್ನೂ ನಡೆಸಿದ್ದಾರೆ. ಸದ್ಯಪ್ರಸಕ್ತ ನೂಪುರಭ್ರಮರಿಯ ಅಂಕಣಗಾರ್ತಿಯಾಗಿ ತಮ್ಮ ಅನುಭವ ಮತ್ತು ವಿಚಾರಗಳನ್ನು ಮತ್ತೊಮ್ಮೆ ದಾಖಲೀಕರಿಸುತ್ತಿರುವ ಅವರು ನಮ್ಮೊಂದಿಗಿರುವುದು ಸೌಭಾಗ್ಯ.   ಈ ಸಲದ ಅವರ ಅಂಕಣ ’ನೃತ್ಯದಲ್ಲಿ ಶೃಂಗಾರ’ ವಿಷಯಕವಾಗಿದೆ.