ನೃತ್ಯ ನಾಟಕಗಳಾಗಿ ಕನ್ನಡ ಕಾವ್ಯ : ಒಂದು ಅವಲೋಕನ

Abstract

ನೃತ್ಯವನ್ನು ಪ್ರಧಾನವಾಗಿರಿಸಿಕೊಂಡು ಸಂಗೀತ, ನಾಟಕ, ಪರಿಕರಗಳೊಂದಿಗೆ ಒಂದು ಕತೆಯನ್ನು ರಂಗದಮೇಲೆ ಪ್ರಯೋಗಿಸುವ ಕಲಾಪ್ರಕಾರವನ್ನು ನೃತ್ಯನಾಟಕವೆಂದು ಕರೆಯಬಹುದು. ಸಂಗೀತವೇ ಪ್ರಧಾನವಾದಾಗ ಅದನ್ನು ಗೀತನಾಟಕ ಅಥವಾ ಗೇಯನಾಟಕವೆಂದು ಕರೆಯುತ್ತಾರೆ. ಪಾಶ್ಚಿಮಾತ್ಯರು ಈ ಗೀತನಾಟಕಗಳನ್ನು ಒಪೇರಾಗಳೆಂದು ಕರೆಯುತ್ತಾರೆ. ಭಾರತದಲ್ಲಿ ಗೀತನಾಟಕಗಳು ಹಾಗೂ ನೃತ್ಯ ನಾಟಕಗಳಲ್ಲಿನ ವ್ಯತ್ಯಾಸ ‘ತೀರ ಅಲ್ಪವಾಗಿದ್ದು ಒಂದು ಕಲಾರೂಪ ಇನ್ನೊಂದು ಕಲಾರೂಪಕ್ಕೆ ಸುಲಭವಾಗಿ ಹೊರಳಬಹುದಾಗಿದೆ’*(೧). ಭಾರತದಲ್ಲಿ ಗೀತನಾಟಕ ಮತ್ತು ಗೇಯನಾಟಕಗಳು ಒಂದೇ ನಾಣ್ಯದ ಎರಡುಮುಖದಂತೆ ಪ್ರಯೋಗಿಸಲ್ಪಡುತ್ತಿದೆ. ‘ಗೇಯನಾಟಕದ ಮೂಲ ಜನಪದ’*(೨)ಆಗಿದ್ದು ಇದರ ಪ್ರಾಚೀನತೆಯನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ.ಸುಮಾರು ಕ್ರಿ.ಪೂ. ಎರಡನೇ ಶತಮಾನದಿಂದ ಕ್ರಿ.ಶ. ಆರನೇ ಶತಮಾನದ ಕಾಲಾವಧಿಯಲ್ಲಿ ರಚಿತವಾದ ಭರತನ ನಾಟ್ಯಶಾಸ್ತ್ರದಲ್ಲಿನ ನಾಟ್ಯಸಂಪ್ರದಾಯವು ಗೀತ, ವಾದ್ಯ, ನೃತ್ಯ ಹಾಗೂ ನಾಟಕದ ಅಂಶಗಳನ್ನೊಳಗೊಂಡ ರಂಗಪ್ರಯೋಗವಾಗಿದೆ. ಇದನ್ನು ನೃತ್ಯನಾಟಕವೆಂದೇ ಪರಿಗಣಿಸಬಹುದಾಗಿದ್ದು, ತನ್ಮೂಲಕ ಐತಿಹಾಸಿಕವಾಗಿ ಭಾರತದಲ್ಲಿನ ನೃತ್ಯನಾಟಕದ ಪ್ರಾಚೀನತೆಯನ್ನು ನಿರ್ಧರಿಸ ಬಹುದಾಗಿದೆ. ನಾಟ್ಯಶಾಸ್ತ್ರದ ರಚನೆಯ ಕಾಲಘಟ್ಟಕ್ಕೂ ಮೊದಲೇ ಈ ಕಲಾಪ್ರಕಾರವು ಸಾಕಷ್ಟು ಪ್ರೌಢಿಮೆ ಪಡೆದಿರುವುನ್ನು ಖಚಿತವಾಗಿ ಊಹಿಸಬಹುದಾಗಿದೆ.