ಹತ್ತನೇ ವರುಷದ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿರುವ ನೂಪುರ ಭ್ರಮರಿಗೆ ಎಲ್ಲವೂ ಹೊಸತಿನ ಸಂಭ್ರಮ

ಹತ್ತನೇ ವರುಷದ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿರುವ ನೂಪುರ ಭ್ರಮರಿಗೆ ಎಲ್ಲವೂ ಹೊಸತಿನ ಸಂಭ್ರಮ. ಅಷ್ಟಕ್ಕೂ ಹೊಸತನ ಎಂದರೆ ಯಾವುದು ? - ಹಳತಲದ್ದು ಹೊಸತು - ಅಂದರೆ ಇವತ್ತಿನ ಕಾಲಘಟ್ಟಕ್ಕೆ ಸ್ಪಂದಿಸುವುದು- ಆಧುನಿಕತೆ ಎಂಬುದು ಸಾಮಾನ್ಯ ತಿಳಿವು. ಈಗಿನದ್ದಲ್ಲದ ಎಲ್ಲ ವಸ್ತು-ವಿಷಯ-ಕಾಲವೂ ಹೊಸತೇ. ಅದು ಪ್ರತೀ ಕ್ಷಣದ ಹುಟ್ಟು.   ಹೊಸತನ, ನೂತನ ಅಥವಾ ನಾವೀನ್ಯ ಎಂಬುದು ಪದಾರ್ಥ(ಪದ+ ಅರ್ಥ)ಕ್ಕಿಂತಲೂ ವಾಕ್ಯಾರ್ಥಕ್ಕೆ ಒಗ್ಗುವ ಪದ. ಇಂಗ್ಲೀಷ್ ಭಾಷೆಯಲ್ಲಿ ಅನೇಕ ಸಾಂದರ್ಭಿಕ ಅರ್ಥಗಳನ್ನು ಪಡೆಯುವುದು ಈ ದೃಷ್ಟಿಯಿಂದಲೇ. Search For Newness, Birth, Quest, Revolution In Fresh Possibilities, Breaking Monotony, Overcoming Monotony, Renewal Of Life In, Regaining Beauty, Restoring Vibrancy...,ಹೀಗೆ ಹೊಸತನ ಎಂಬುದಕ್ಕೆ ಸತ್ಯ, ಕಾಣ್ಕೆ, ದರ್ಶನ, ರಸ ಎಂಬೆಲ್ಲಾ ಆದರ್ಶಗಳ ಮೌಲ್ಯ ಹೊಂದಿಕೊಂಡು ಬಾಳುತ್ತವೆ. ಹಾಗಾಗಿ ಹೊಸತಿನೊಂದಿಗೆ ಸದಾಶಯವನ್ನು ಪಾಲಿಸಿ ಪೊರೆಯಬೇಕಾದ ಜವಾಬ್ದಾರಿ ಅಂತರ್ಗರ್ಭಿತವಾಗಿ ಹಿಂಬಾಲಿಸಿಕೊಂಡು ಬಂದೇ ಬರುತ್ತದೆ. ಇದು ಕಲಾವರಣದಲ್ಲಂತೂ ನೂರಕ್ಕೆ ನೂರು ದಿಟ.

ಮನೋಧರ್ಮ ಮರೆಯಾಗುತ್ತಿದೆ ನೃತ್ಯಮನೆಯೊಳಗೆ

ನಾವು ಸಂಗೀತದವರು, ಹಾಡುವ ಪ್ರತೀ ಕೃತಿಗೂ ಮನೋಧರ್ಮಕ್ಕನುಗುಣವಾಗಿ ಸ್ವಂತ ಸ್ವರ-ಪ್ರಸ್ತಾರ, ತನಿ-ಆವರ್ತನಗಳನ್ನು ಹೊಸೆದು ಹಾಡಬಲ್ಲೆವು; ನುಡಿಸಬಲ್ಲೆವು. ಆದರೆ ಇದೇ ಸಾಧ್ಯತೆ ಭರತನಾಟ್ಯದಂತಹ ನೃತ್ಯಕ್ರಮದಲ್ಲೇಕಿಲ್ಲ? ಸ್ವ ಅಭ್ಯಾಸ ಮಾಡಿಕೊಳ್ಳುವುದಾದರೆ ಪರವಾಗಿಲ್ಲ. ಆದರೆ ಮಗ್ಗಿ ಉರುಹೊಡೆದಂತೆ ರಿಹರ್ಸಲ್‍ಗಳು ಮಾಡಿ, `ಫರ್ಪೆಕ್ಟ್' ಆಗಿಯೇ ರಂಗಕ್ಕೇರಬೇಕೆಂದರೆ ಅದರ ಆಯುಷ್ಯ ಎಷ್ಟು? ನೃತ್ಯಕ್ರಮಕ್ಕೆ ಪಕ್ಕವಾದ್ಯದವರ ಸಾಂಗತ್ಯದ ಹಿನ್ನೆಲೆಯಲ್ಲಿ ಒಂದಷ್ಟು ಪೂರ್ವ ತಯಾರಿಗಳಿರಬೇಕೇನೋ ನಿಜ. ಸಂಗೀತದವರಾಗಿ ನಾವೂ ಮಾಡುತ್ತೇವೆ. ಆದರೆ ಕಚೇರಿಯ ಹಂತಹಂತಕ್ಕೂ ಒಂದಿಷ್ಟು ಬದಲಾವಣೆಯಿಲ್ಲದೆ ಕಂಠಪಾಠ ಮಾಡಿಕೊಂಡು ಒಂದೇ ನೃತ್ಯವನ್ನು ಜೀವನದುದ್ದಕ್ಕೂ ಪ್ರಾಕ್ಟೀಸ್, ರಿಹರ್ಸಲ್ ಮಾಡುವುದಾದರೆ ಏನಿದೆ ಸ್ವಾರಸ್ಯ? `ಮಕ್ಕಳಿಗೆ ಸುಲಭವಾಗಬೇಕು' ಎಂಬ ಕಾರಣ ಕೊಡುವುದಾದರೆ ಯಾಕೆ ಪೂರ್ಣ ಕಲಿಯುವ ಮುಂಚೆಯೇ ರಂಗಕ್ಕೆ ಹತ್ತಿಸಬೇಕು? ಗ್ರೂಪ್‍ನಲ್ಲಿ ಮಾಡುವುದಾದರೆ ಏನೋ ಪರವಾಗಿಲ್ಲವೆನ್ನಬಹುದು. ಆದರೆ ಏಕವ್ಯಕ್ತಿಯ ನೃತ್ಯ ಪ್ರದರ್ಶನಕ್ಕೂ ಇದೇ ಜಾಯಮಾನವೆಂದರೆ ಹ್ಯಾಗೆ? ಅದಿರಲಿ, ಕಲಿಯುವಾಗ ಅಥವಾ ಕಲಿಸುವಾಗಲೂ ಶಿಕ್ಷಕರು, ಗುರುಗಳು ಇದೇ ವರ್ತನೆ ತೋರಿಸುತ್ತಾರಲ್ಲಾ! ಸಿದ್ಧ ಮಾದರಿಯ ಬೊಂಬೆಗಳನ್ನು ಮಾಡಿಡುವುದಾದರೆ ಕಲೆಗೆ ಏನು ಪ್ರಯೋಜನ? ಕೊರಿಯೋಗ್ರಫಿ ಎಂದರೆ ಇದೇನಾ? ಸಹೃದಯ ರಸಿಕನಿಗೆ ಸಿಗುವ ಕಲಾಸ್ವಾದವೇನು? ಸರಿ, ಕಲಾವಿದನಿಗೂ `ಬೋರ್' ಹೊಡೆಯುವುದಿಲ್ಲವೇ? ಅಷ್ಟಕ್ಕೂ ರಂಗದಲ್ಲೇ ಮನೋಧರ್ಮಕ್ಕನುಗುಣವಾದ ಕಲೆ ಸೃಷ್ಟಿ ಮಾಡುವ ಸಾಮಥ್ರ್ಯವಿಲ್ಲದವನು ಕಲಾವಿದ ಹೇಗಾದಾನು? ನೋಡಹೊರಟರೆ ನಮ್ಮದೂ ಶಾಸ್ತ್ರೀಯ; ನಿಮ್ಮದೂ ಶಾಸ್ತ್ರೀಯ; ಹೀಗಿದಾಗ್ಯೂ ಏಕೆ ಈ ಅಂತರ? ' ಎಂದು ಸ್ನೇಹಿತರ ಮಡದಿ ಪ್ರಶ್ನೆ ಮೇಲೆ ಪ್ರಶ್ನೆ ಮುಂದಿಟ್ಟಾಗ ಎಲ್ಲಿಲ್ಲದ ಕಸಿವಿಸಿ.

ಮಹಾನಟನಿಗೆ ಕಾವ್ಯನೃತ್ಯೋಪಚಾರ- ಆಲಯವಿಶೇಷತೆಯ ನರ್ತನಕ್ಕೊಂದು ಸೇರ್ಪಡೆ

ದೇವಾಲಯ ಶಿಲ್ಪಗಳಲ್ಲಿ ನಾಟ್ಯಾಯಮಾನತೆ - ಸಂಶೋಧನ ಲೇಖನದ ೫ನೇಯ ಭಾಗವಿದು.ಪ್ರಕೃತ ಲೇಖನದ ಪ್ರಧಾನ ಆಶಯವನ್ನು ಪೋಷಿಸುವಂತೆ ಶಿಲ್ಪಸಾಮ್ರಾಜ್ಯದಮುಖ್ಯವಾಹಿನಿಯಲ್ಲಿ ಬೆಳಗಿಯೂ ಮರೆಯಲ್ಲಿರುವ ಕರ್ನಾಟಕದ ಒಂದು ಉತ್ಕೃಷ್ಟ ಶಿಲ್ಪಕ್ಕೆ ನೃತ್ಯಕಾವ್ಯವೊಂದನ್ನು ರಚಿಸುವ ಪ್ರಯತ್ನ ಲೇಖಿಕೆಯದ್ದು. ಕವಿಮಹಾಶಯರು ಇಂತಹ ಹಲವು ಪ್ರಯತ್ನಗಳಲ್ಲಿ ಪಾಲ್ಗೊಂಡು ನೃತ್ಯಕ್ಕೆ ಅನುಕೂಲವಾದ ಕಾವ್ಯಗಳನ್ನುರಚಿಸಬಹುದು.

ಗಣಪತಿ ಶಬ್ದ

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಹೊರಾವರಣದಲ್ಲಿ ನರ್ತನವಾಡುವ ನಾಟ್ಯಗಣಪತಿಯಂತೂ ಮತ್ತೂ ಆಂಗಿಕ-ಸಾತ್ತ್ವಿಕ ಸಮನ್ವಿತನಾಗಿ ಭಾವವ್ಯಂಜಕ. ಗಣಪತಿಯ ಕುರಿತಂತೆ ಸಾಕಷ್ಟು ತತ್ತ್ವ ಜಿಜ್ಞಾsಸೆ, ಗೀತ-ಕಾವ್ಯ-ನೃತ್ಯಪ್ರಸಕ್ತಿಗಳೂ ಹಾಗೆಯೇ ನೃತ್ಯಗಣಪತಿಯ ಕುರಿತೂ ಐತಿಹಾಸಿಕ ವಿವರಗಳು ಇರುವುದರಿಂದ ಅವುಗಳೆಲ್ಲದರ ಬಗೆಗೆ ಮತ್ತೊಮ್ಮೆ ಇಲ್ಲಿ ದಾಖಲಿಸುವ ಗಾತ್ರಭರಿತವಾದ ಕಾರ್ಯವು ಖಂಡಿತಾ ಗಣಪತಿಯ ಹೊಟ್ಟೆಯಂತೆಯೇ ಹಿರಿದು. ಇಲ್ಲಿ ಉಲ್ಲೇಖಿಸಲೇಬೇಕಾದದ್ದೆಂದರೆ, ಶಿಲ್ಪ ಮತ್ತು ನರ್ತನವು ಪರಸ್ಪರ ಕೊಡುಕೊಳ್ಳುವಿಕೆಯ ನೆಲೆಯಲ್ಲಿ ಪಡೆಯುವ ಉಪಕಾರಗಳನ್ನು.ನೃತ್ಯಾವಹವಾಗಿ ಗಣಪತಿಯನ್ನು ಕಾಣುವುದರಲ್ಲಿಯೂ ಹೊಸತನವು ಅಪೇಕ್ಷಿತ ವಿಚಾರ. ಬಹಳಷ್ಟು ಸಲ ಪ್ರಥಮಪೂಜಿತ, ವಿಘ್ನನಿವಾರಕನೆಂದಷ್ಟೇ ಸ್ತುತಿಗೆ ಮೀಸಲಾಗಿಯೋ ಇಲ್ಲವೇ ಕೆಲವೊಂದು ಜನಪ್ರಿಯ ಕತೆಗಳನ್ನು ಸಂಚಾರಿ ಅಭಿನಯಗಳಷ್ಟಕ್ಕೇ ಅಳವಡಿಸಿಕೊಳ್ಳುವುದಕ್ಕಷ್ಟೇ ಗಣಪತಿ ಸೀಮಿತವಾಗುತ್ತಾನೆ. ಹಸ್ತಗಳಲ್ಲಾದರೋ ಕಪಿತ್ಥ ಸಂಯುತ ಹಸ್ತ (ಕುಕ್ಷಿ ವಿನ್ಯಾಸ), ಅರಾಳ ಹಸ್ತ (ಕರ್ಣಗಾತ್ರ), ಕರಿಹಸ್ತ (ಮುಕುಲ, ಅರಾಳದಿಂದ ಸೊಂಡಿಲ ಮೊಗನೆಂಬ ಸಂಕೇತ), ತಾಮ್ರಚೂಡ (ಪಾಶಾಂಕುಶಧಾರಿ), ಉನ್ಮುಖವಾದ ಊರ್ಣನಾಭ ಮತ್ತು ಅಭಯ ಪತಾಕ ಹಸ್ತ (ಮೋದಕಪ್ರಿಯ) ಮುಂತಾದವುಗಳನ್ನು ಬಳಸಿ ಅಭಂಗದಲ್ಲಿ ಪಾದವಿನ್ಯಾಸವನ್ನು ನಡೆಸುವುದಕ್ಕಷ್ಟೇ ಗಣಪತಿಯ ಆಂಗಿಕ ಮಿತಿಗೊಳ್ಳುತ್ತಿರುವುದು ಸರ್ವವೇದ್ಯ. ಹಸ್ತ-ಮುದ್ರೆಗಳಿಂದಾಚೆಗೆ ಕಲೆಯಲ್ಲಿ ಸಾಧಿಸಬಹುದಾದ ಅಂಶಗಳು ಅನೇಕವಿದೆಯೆಂಬುದು ಬಲ್ಲೆವಷ್ಟೇ. ಹಾಸಸ್ಥಾಯಿಗೂ, ಹಾಸ್ಯರಸಕ್ಕೂ ಆತನೇ ಅಧಿಪತಿ ಎಂಬಲ್ಲಿ ನರ್ತನಸಮಯದಲ್ಲ್ಲಿ ಆತನನ್ನು ಬಳಸಿಕೊಳ್ಳಬಹುದಾದ ಸೂಕ್ಷ್ಮ ಇನ್ನಷ್ಟು ಸ್ಪಷ್ಟವಾಗುತ್ತದೆ. ಕೇವಲ ಸಂಕೇತರೂಪವಷ್ಟೇ ಅಲ್ಲದೆ ನಾಟ್ಯಶಾಸ್ತ್ರೋಚಿತವಾದ ಅಂಗೋಪಾಂಗ ಪ್ರತ್ಯಂಗಸಮನ್ವಯದಲ್ಲಿ ನರ್ತನರಂಗದಲ್ಲಿ ಗಣಪತಿಯನ್ನು ಕಟೆದರೆ ಈಗಾಗಲೇ ಶಿಲ್ಪಶಾಸ್ತ್ರದಲ್ಲಿ ಕಾಣುತ್ತಿರುವ ನಾಟ್ಯಗಣಪತಿಯ ಆಂಗಿಕ-ಸಾತ್ವಿಕ ಲೀಲಾವಿಶೇಷ ಸಾಕ್ಷಾತ್ಕಾರಗೊಳ್ಳುತ್ತದೆ.