ವಾಲ್ಮೀಕಿ ರಾಮಾಯಣದಲ್ಲಿ ನಾಟ್ಯ, ಸಂಗೀತದ ಪರಿಭಾಷೆಗಳ ಸಂಕಲನ 1.ಬಾಲಕಾಂಡ.

Highlights

ಇಸವಿ 2019. ಈ ವರ್ಷದ ಮಧ್ಯದಿಂದ ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ವರ್ಷದ ಕಡೆಯವರೆಗೂ ನನ್ನಂತಹ ಅನೇಕರಿಗೆ ಸಂಭ್ರಮವೋ ಸಂಭ್ರಮ. ಕಾರಣವು ಹೀಗಿದೆ: ಗೋಕರ್ಣದಲ್ಲಿ ಲೋಕೋಪಕಾರ್ಥ ಸಲುವಾಗಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪಿಸಲೋಸುಗ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸನ್ನಿಧಾನಂಗಳು 'ಧಾರಾರಾಮಾಯಣ' ವೆಂಬ ವಾಲ್ಮೀಕಿರಾಮಾಯಣದ ಪ್ರವಚನವನ್ನು ಲೋಕಕ್ಕೆ ಈ ಕಾಲದಲ್ಲಿ ಅನುಗ್ರಹಿಸುತ್ತಿದ್ದರು. ರಾಮನನ್ನು ಕುರಿತಾಗಿ ವಾಲಿವಧೆ, ಸೀತಾ ಅಗ್ನಿಪ್ರವೇಶ ಮುಂತಾದ ಅನೇಕ ಸಂದರ್ಭಗಳನ್ನು ಕುರಿತು ಸಂಶಯ ಪೀಡಿತಳಾಗಿದ್ದ ನಾನೂ ಒರಿಜಿನಲ್ ವಾಲ್ಮೀಕಿರಾಮಾಯಣವನ್ನು ಕೇಳೇ ಬಿಡೋಣ ಎಂದು ಆರಂಭಿಸಿದವಳಿಗೆ ಅತ್ಯಂತ ಅಮೋಘ ಆಶ್ಚರ್ಯವೇ ಕಾದಿತ್ತು! ಮೊದಮೊದಲು ದಿನ ಬಿಟ್ಟು ದಿನ ಹೋಗುತ್ತಿದ್ದವಳು ಮತ್ತೆ ಪ್ರತಿದಿನ ಹೋಗಲು ಆರಂಭಿಸಿದೆ! ಮೊದಲ ಲಾಭವೆಂದರೆ ನನಗಿದ್ದ ಎಲ್ಲ ಸಂಶಯಗಳೂ ಪರಿಹಾರವಾದದ್ದು. ನಾನಂತೂ ವಾಲ್ಮೀಕಿರಾಮಾಯಣದಲ್ಲಿದ್ದ ವಸ್ತುವಿಶೇಷಗಳ ಅಗಾಧತೆಯನ್ನು ನೋಡಿ ಅತ್ಯಂತ ಬೆರಗಾಗಿಬಿಟ್ಟೆ! ಹಳ್ಳಿಯ ಪುಟ್ಟ ಗುಡ್ಡವೇ ಪರ್ವತವೆಂದು, ಅಗಾಧವೆಂದೂ ಭಾವಿಸಿದವಳಿಗೆ ಕೈಲಾಸ ಪರ್ವತದ ದರ್ಶನವನ್ನು ಮಾಡಿಸಿಬಿಟ್ಟರೆ ಯಾವ ಅನುಭವವಾಗುತ್ತದೋ ಅದೇ ಅನುಭವ ನನಗಾಯಿತು. ಈ ಮಹಾಕಾವ್ಯದಲ್ಲಿ ಇಲ್ಲದ್ದಾದರೂ ಏನು! ಕಾವ್ಯಲಕ್ಷಣಗಳೇ, ಇತಿಹಾಸವೇ, ಪುರಾಣವೇ, ಜ್ಯೋತಿಷವೇ, ಶಕುನಶಾಸ್ತ್ರವೇ, ಸಸ್ಯಶಾಸ್ತ್ರವೇ, ಭೂಶಾಸ್ತ್ರವೇ, ರಾಜ್ಯಶಾಸ್ತ್ರವೇ, ಅರ್ಥಶಾಸ್ತ್ರವೇ, ಮಾನವಶಾಸ್ತ್ರವೇ, ಮನಃಶಾಸ್ತ್ರವೇ, ಸಂಗೀತ - ನೃತ್ಯಾದಿಗಳೇ, ಜನಾಂಗಗಳ ವಿಷಯಗಳೇ, ನೀತಿಬೋಧೆಯೇ, ಯಾವುದಿಲ್ಲವೆಂದು ಹೇಳುವುದು?! ಸುಂದರಕಾಂಡದ ಹನುಮಂತನ ಶಕ್ತಿಯ ಅಗಾಧತೆ, ಸಾಹಸಗಳು ಈಗಿನ ಸೂಪರ್ ಮ್ಯಾನ್ ಕಲ್ಪನೆಗಿಂತಲೂ ಅತೀ ರೋಚಕವಾದದ್ದು! ಆಗ ತಾನೇ ಭರತಮುನಿಯ ನಾಟ್ಯಶಾಸ್ತ್ರದಲ್ಲಿಯೂ ಧನಂಜಯನ ದಶರೂಪಕದಲ್ಲಿಯೂ ಕಾವ್ಯ ಲಕ್ಷಣಗಳನ್ನು ಓದಿದ್ದ ನನಗೆ ವಾಲ್ಮೀಕಿರಾಮಾಯಣದಲ್ಲಿ ಪ್ರತಿಯೊಂದು ಕಾಂಡವೂ ಆ ಲಕ್ಷಣಗಳನ್ನು ಹೊಂದಿದ್ದರಿಂದಲೇ ಅದು ಆದಿಕಾವ್ಯವೂ ಮಹಾಕಾವ್ಯವೂ ಎಂದು ವಿಶ್ವದ ವಿದ್ವಲ್ಲೋಕದಲ್ಲಿ ಪರಿಗಣಿತವಾಗಿದೆ ಎಂದು ಬೋಧೆಯಾಯಿತು. ನನಗೇ ಹೀಗಾಗಿದ್ದರೆ ನಿಜವಿದ್ವಾಂಸರಿಗೆ ಇನ್ನೂ ಏನೆಲ್ಲ ಪ್ರಪಂಚಗಳೇ ಈ ಮಹಾಕಾವ್ಯದಲ್ಲಿ ಕಂಡೀತು ಎಂದು ನನಗೆನ್ನಿಸಿತು. ಧಾರಾರಾಮಾಯಣವನ್ನು ಕೇಳಿದಾರಭ್ಯ ನನಗೆ ವಾಲ್ಮೀಕಿರಾಮಾಯಣದಲ್ಲಿ ಇರುವ ಸಂಗೀತ - ನೃತ್ಯಗಳ ಸಂದರ್ಭಗಳನ್ನು ಒಂದೆಡೆ ಕಲೆಹಾಕಬೇಕೆಂಬ ಆಸೆ ಹುಟ್ಟಿತು. ಆದರೆ ಸಂಸ್ಕೃತವೇ ಬಾರದ ನಾನು ಏನು ಮಾಡುವುದು ಎಂಬ ಅಧೈರ್ಯವೇ ಆದರೂ ವಿದ್ವಾನ್ ಎನ್. ರಂಗನಾಥ ಶರ್ಮಾರವರ ಕನ್ನಡ ಅನುವಾದವನ್ನೂ, ಅತ್ಯಂತ ಅವಶ್ಯಕವೆಂದು ಕಂಡಲ್ಲಿ ಗೂಗಲ್ ನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ದೊರೆಯುವ https://www.valmikiramayan.net - ಇದರ ಅನುವಾದವನ್ನು ಅವಲಂಬಿಸಿಯಾದರೂ ಸಂಗೀತ - ನೃತ್ಯಾದಿಗಳ ಪರಿಭಾಷೆಗಳನ್ನೂ ಹಾಗೂ ಸಂದರ್ಭಗಳನ್ನಾದರೂ ಸಂಗ್ರಹಿಸಿಡೋಣವೆಂಬ ಆಸೆಯು ಬಲವತ್ತರವಾಯಿತು. ಎಂದೇ ಈ ಬರಹದ ಯತ್ನ. ಸಾಧ್ಯವಾದಷ್ಟೂ ಪರಿಭಾಷೆಗಳ ಅರ್ಥವನ್ನು ನೀಡಲು ಯತ್ನಿಸುತ್ತೇನೆ.

Abstract

ರಾಮಾಯಣವೆಂಬ ಆದಿಕಾವ್ಯ ಪ್ರಪಂಚಕ್ಕೆ ಕೊಟ್ಟ ಮಾರ್ಗ, ಸಂದೇಶ, ಗಮ್ಯ ಬಹಳ ದೊದ್ಡ್ಡದು,. ಅದನ್ನು ಯಥಾಸಾಧ್ಯ ಬಗೆಬಗೆಯಾಗಿ ಸಂಗೀತ ನಾಟ್ಯಗಳೂ ಅನುಕರಿಸುತ್ತಲೇ ಬಂದಿವೆ. ಇಂಥ ರಾಮಾಯಣ ಕಾವ್ಯದೊಳಗೆ ಸಂಗೀತ ನಾಟ್ಯವು ಹೇಗಿದೆ? ಯಾವ ಬಗೆಯ ಪರಿಭಾಷೆಗಳು ದೊರೆಯುತ್ತವೆ? ಯಾವ ರೀತಿ ವ್ಯಾಖ್ಯಾನಿಸಬೇಕು- ಎಂಬ ಕುರಿತಾದ ಶೋಧಲೇಖನ ಈ ಸಲದ ಭರತಕೌತುಕ ಅಂಕಣದಿಂದ ಮೊದಲ್ಗೊಳ್ಳುತ್ತದೆ . ಈ ಸಲದ ಸಂಚಿಕೆಯಲ್ಲಿ ಬಾಲಕಾಂಡದಲ್ಲಿ ಲಭ್ಯವಾಗುವ ಸಂಗೀತ-ನಾಟ್ಯ ಪರಿಭಾಷೆಗಳ ಬಗ್ಗೆ ವಿದುಷಿ ಕಾಂಚನ ರೋಹಿಣೀ ಸುಬ್ಬರತ್ಮಂ ಅವರು ಬರೆದ ಸೋದಾಹರಣ ಶೋಧ ಲೇಖನವನ್ನು ಓದಬಹುದು..