ನೃತ್ಯಸಂಶೋಧನೆಯ ಸಾಧ್ಯತೆ ಮತ್ತು ಸವಾಲುಗಳು

Highlights

ಶತಾವಧಾನಿ ಡಾ. ಆರ್. ಗಣೇಶ್, ದಿಗ್ದರ್ಶಕ ನುಡಿಗಳು- 2013ರಾಜ್ಯಮಟ್ಟದ ನೃತ್ಯ ಸಂಶೋಧನಾ ವಿಚಾರಸಂಕಿರಣ ನೂಪುರಾಗಮ- ನೃತ್ಯಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟಿತ 2014- ರಾಷ್ಟ್ರೀಯ ನೃತ್ಯ ಸಂಶೋಧನಾ ಸಮ್ಮೇಳನದಲ್ಲಿ.

ನೃತ್ಯಸಂಶೋಧನೆಯ ಸಾಧ್ಯತೆ ಮತ್ತು ಸವಾಲುಗಳು- ಶತಾವಧಾನಿ ಡಾ. ಆರ್. ಗಣೇಶ್

Abstract

ನೃತ್ಯದಲ್ಲಿ ಮೂಲಭೂತವಾಗಿರುವಂಥದ್ದು ಚಲನೆ. ಆ ಚಲನೆ ದೇಹದ ಎಲ್ಲ ಅಂಗ- ಪ್ರತ್ಯಂಗ-ಉಪಾಂಗಗಳಿಗೆ ಸಂಬಂಧಪಟ್ಟದ್ದು; ಮತ್ತು ಈ ಚಲನೆಯ ವಿಶಿಷ್ಟತೆಯ ಕಾರಣದಿಂದಲೇ ವಿಭಿನ್ನ ನೃತ್ಯಪದ್ಧತಿಗಳು ಅಥವಾ ನೃತ್ತಪದ್ಧತಿಗಳು ಜಗದಾದ್ಯಂತ ಹಬ್ಬಿವೆ. ಈ ಕಾರಣದಿಂದಲೇ ಚಲನೆಯನ್ನು ಕೇಂದ್ರದಲ್ಲಿರಿಸಿಕೊಂಡೇ ಎಲ್ಲ ನೃತ್ಯದ ಅಧ್ಯಯನಗಳು ನಡೆಯುವುದು ಒಳಿತು. ಇದು ಆ ನೃತ್ಯಪದ್ಧತಿಯ ರೂಪದ ಬಗೆಗಿನ ಮಾತಾದರೆ ಸ್ವರೂಪ ಅನ್ನುವುದು ಮತ್ತೊಂದು ಆಯಾಮ. ಆ ಸ್ವರೂಪವು ಸಕಲ ಕಲೆಗಳಿಗೂ ಮೂಲಭೂತವಾಗಿ ಒಂದೇ ಆಗಿದೆ. ಅದುವೇ ರಸ. ಸಕಲಾನುಭವಗಳ ಪರಮಾನುಭವ ಎನ್ನುವ ನೆಲೆಯಲ್ಲಿ ಬರುವಂಥದ್ದೇ ಆನಂದ. ಅದು ಅತ್ಯಂತ ಉನ್ನತೋನ್ನತವೂ ಸಾರ್ವತ್ರಿಕವೂ ನಿರ್ವಿಶೇಷವೂ ಆದ ಅನುಭವ. ಈ ಕಾರಣದಿಂದ ಕಂಡಾಗ ಸ್ವರೂಪಕ್ಕೆ ಬಂದೊಡನೆ ಯಾವ ಕಲೆಯೂ ದರ್ಶನಶಾಸ್ತ್ರಗಳ (philosophy) ಕಡೆಗೆ ತಿರುಗಬೇಕಾಗುತ್ತದೆ. ಹೀಗಾಗಿ ನೃತ್ಯಸಂಶೋಧನೆಯನ್ನೂ ಒಳಗೊಂಡಂತೆ ಮಿಕ್ಕ ಯಾವುದೇ ಕಲೆ ಅಥವಾ ಇನ್ನಾವುದೇ ಶಾಸ್ತ್ರಗಳ ಸಂಶೋಧನೆಗೆ ದಾರ್ಶನಿಕತತ್ತ್ವಗಳ ಸಮಾಲೋಚನೆ ಅನಿವಾರ್ಯ ಮತ್ತು ಮುಖ್ಯ.