ಅವಧಾನ ಪಲ್ಲವಿ – ತಾಳಾವಧಾನ ವಿಶಿಷ್ಟ, ಸವಾಲಿನ ತಾಳ ಕಲೆ

Abstract

ವಿದುಷಿ ರೋಹಿಣಿ ಸುಬ್ಬರತ್ನಂ ನಾಡಿನ ಸುವಿಖ್ಯಾತ ವಿದ್ವಾಂಸರಾದ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣ ಅವರ ಸುಪುತ್ರಿ. ಉಪ್ಪಿನಂಗಡಿಯ ಕಾಂಚನ ಎಂಬ ಊರನ್ನು ಸಂಗೀತ ವಿಶ್ವವಿದ್ಯಾಲಯವಾಗಿ ಪರಿವರ್ತಿಸಿ ಗ್ರಾಮಕ್ಕೆ ಕಲೆಯ ಸಂಸರ್ಗದ ಮೂಲಕ ಮನ್ನಣೆ ತಂದುಕೊಟ್ಟ ಕಾಂಚನ ಸುಬ್ಬರತ್ನಂ ಅವರ ಪತ್ನಿ. ಅವರ ಮೂವರು ಸುಪುತ್ರಿಯರು ಶ್ರೀರಂಜಿನಿ, ಶ್ರುತಿರಂಜಿನಿ, ಸುಮನಸರಂಜಿನಿ ಸಂಗೀತಕಲಾವಿದರು. ನಾಡಿನ ಆಢ್ಯ ಸಂಗೀತ ಮನೆತನ ರೋಹಿಣಿಯಮ್ಮನವರದ್ದು. ನೂಪುರ ಭ್ರಮರಿಯ ಆತ್ಮೀಯ ಬಳಗದವರಲ್ಲೊಬ್ಬರಾಗಿ ನಮ್ಮನ್ನು ಮುನ್ನಡೆಸುತ್ತಿರುವ ವಯೋವೃದ್ಧೆ, ಜ್ಞಾನವೃದ್ಧೆ ನಮ್ಮ ರೋಹಿಣಿಯಮ್ಮ. ಈಗಾಗಲೇ ವಾಟ್ಸಾಪ್ ಗುಂಪುಗಳಲ್ಲಿ ಅವರೀಯುತ್ತಿರುವ ಅನೇಕ ಕಲಾವಿಶೇಷ ವಿಚಾರಗಳು ಬಹುಮನ್ನಣೆಯನ್ನು ಪಡೆದಿವೆ. ಸಮಯದ ಅಭಾವದ ಜಂಜಾಟಗಳಲ್ಲಿ ಓದಿಗೆ ನಿಲುಕದೆಯೇ ಗ್ರಂಥಸ್ಥವಾಗಿ ಉಳಿದುಹೋಗುವ ಮತ್ತು ಸಮಕಾಲೀನ ಕಲಾಪರಂಪರೆಯನ್ನು ಪರಿಣಾಮಕಾರಿಯಾಗಿ ಅರಿಯುವ ನಿಟ್ಟಿನಲ್ಲಿ ಅವಶ್ಯವಿರುವ ಅನೇಕ ಕುತೂಹಲಕಾರಿ ವಿಚಾರಗಳನ್ನು ಗ್ರಂಥಗಳಿಂದ ಆರಿಸಿ ಸುಲಭವಾಗಿ ತಲುಪುವಂತೆ ನೀಡುವ ಅವರ ಕಳಕಳಿ, ಪ್ರಯತ್ನ ಸ್ತುತ್ಯರ್ಹ. ಅವರನ್ನು ನೂಪುರದ ಅಂಗಳಕ್ಕೆಳೆಯುವುದರಿಂದ ನಮಗಾಗುವ ಅರಿವಿನ ಲಾಭ ಅನೇಕ. ಕಳೆದ 5 ಸಂಚಿಕೆಗಳಿಂದಲೂ ‘ಭರತಕೌತುಕ’ ಎಂಬ ಅಂಕಣದ ಮೂಲಕ ಪ್ರಾಚೀನ ಕಲಾವಿಷಯಗಳ ಕೌತುಕವನ್ನು ದರ್ಶನ ಮಾಡಿಸುತ್ತಿದ್ದಾರೆ.  ಈ ಸಲದ ಸಂಚಿಕೆಯ ಭರತ ಕೌತುಕ- ವಿದುಷಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರ ಅಂಕಣದಲ್ಲಿ ಅವಧಾನ ಪಲ್ಲವಿ – ತಾಳಾವಧಾನ ಎಂಬ ವಿಶಿಷ್ಟ, ಸವಾಲಿನ ತಾಳ ಕಲೆ ಯ ಬಗ್ಗೆ ಸವಿವರವಾದ ಶೋಧಲೇಖನವನ್ನೇ ಬರೆದಿದ್ದಾರೆ.