ನೃತ್ಯಪ್ರಕಾರ — ಜಕ್ಕಡೀ

Abstract

16ನೆಯ ಶತಮಾನದಲ್ಲಿ ಕನ್ನಡಿಗನಾಗಿದ್ದ ಶ್ರೀಮದ್ ಪಂಡರೀಕ ವಿಠ್ಠಲನು ಇಂದು ಕರ್ಣಾಟಕ ಸಂಗೀತವೆಂದು ಪ್ರಸಿದ್ಧವಾದ ರಾಗಗಳಿಗಾಗಿ 'ಸದ್ರಾಗಚಂದ್ರೋದಯ'ವನ್ನೂ, ಇಂದು ಹಿಂದೂಸ್ಥಾನೀ ಸಂಗೀತವೆಂದು ಪ್ರಸಿದ್ಧವಾಗಿರುವ ರಾಗಗಳನ್ನು ವಿವರಿಸುವ ಗ್ರಂಥಗಳಾದ 'ರಾಗಮಂಜರೀ' - 'ರಾಗಮಾಲಾ'ಗಳನ್ನೂ, ನೃತ್ಯ ಪ್ರಪಂಚಕ್ಕಾಗಿ 'ನರ್ತನನಿರ್ಣಯ'ವನ್ನೂ ರಚಿಸಿದ್ದಾನೆ. ನರ್ತನನಿರ್ಣಯವನ್ನು ನರ್ತಕನಿರ್ಣಯವೆಂದೂ ಕರೆದಿದ್ದಾನೆ. ನರ್ತನನಿರ್ಣಯದಲ್ಲಿ ನಾಲ್ಕು ಪ್ರಕರಣಗಳಲ್ಲಿ ನರ್ತನದಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ತಾಲಧಾರಿ (ನಟ್ಟುವಾಂಗ), ಮೃದಂಗೀ, ಗಾಯಕ ಮತ್ತು ನರ್ತಕರುಗಳಿಗೆ ಅವಶ್ಯಕವಾದ ವಿಷಯಗಳನ್ನು ಬೋಧಿಸಲಾಗಿದೆ. ಬಿಕಾನೀರಿನ ಮಹಾರಾಜ ಸಂಸ್ಕೃತ ಹಸ್ತಪ್ರತಿಗಳ ಭಂಡಾರದಲ್ಲಿ ಎರಡನೆಯ ಆಕರದಲ್ಲಿರುವ 65ನೆಯ ಸಂಖ್ಯೆಯ ಹಸ್ತಪ್ರತಿಯು ಸಮಗ್ರವಾಗಿದ್ದು ಮೇಲಿನ ನಾಲ್ಕು ಪ್ರಕರಣಗಳೇ ಅಲ್ಲದೆ "ನಾಟಕ ಪ್ರಕರಣ"ವೆಂಬ ಐದನೆಯ ಪ್ರಕರಣವನ್ನೂ ಒಳಗೊಂಡಿದ್ದು ತಮ್ಮ ಗ್ರಂಥ ಸಂಪಾದನೆಯಲ್ಲಿ ಬಳಸಿಕೊಳ್ಳಲೆಂದು— "ನರ್ತನನಿರ್ಣಯದ ಈ ಬಿಕಾನೀರ್ ಮಾತೃಕೆಯನ್ನು ಪ್ರತಿಮಾಡಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ನಾನು ವಿಫಲನಾಗಿದ್ದೇನೆ. ಇವು ದೊರೆತಿದ್ದರೆ ಐದನೆಯ ಪ್ರಕರಣವನ್ನು ಪ್ರಕಟಿಸುವುದಷ್ಟೇ ಅಲ್ಲದೆ ನರ್ತಕ ಪ್ರಕರಣದ ಕೊನೆಯ ಭಾಗದಲ್ಲಿರುವ ಒಂದೆರಡು ಲೋಪದೋಷಗಳನ್ನು ತುಂಬಲೂ, ಮಸುಕಾಗಿರುವ ಒಂದೆರಡು ಪಾಠಗಳನ್ನು ಶೋಧಿಸಲೂ ನೆರವಾಗುತ್ತಿತ್ತು", ಎಂದು ಪಂಡರೀಕ ವಿಠ್ಠಲನ ಮೇಲೆ ಹೇಳಿದ ನಾಲ್ಕೂ ಗ್ರಂಥಗಳನ್ನು ಒಂದೆಡೆಯೇ ಸಂಪಾದಿಸಿ ವಿಮರ್ಶೆ, ವ್ಯಾಖ್ಯಾನ, ಟಿಪ್ಪಣಿ ಇತ್ಯಾದಿಗಳನ್ನು ಸಮಗ್ರವಾಗಿ ಬರೆದಂತಹ ತಮ್ಮ 'ಪುಂಡರೀಕಮಾಲಾ' ಗ್ರಂಥದಲ್ಲಿ ಮಹಾಮಹೋಪಾಧ್ಯಾಯ ಡಾ. ರಾ. ಸತ್ಯನಾರಾಯಣರವರು ಬರೆದಿದ್ದಾರೆ. ಈ 'ನಾಟಕ ಪ್ರಕರಣ' ವು ದೊರೆತು ವಿದ್ವಾಂಸರಾದ ಯಾರಾದರೂ ಸಂಪಾದಿಸಿ ಪ್ರಕಟಿಸಿದಲ್ಲಿ ರಂಗಪ್ರಪಂಚಕ್ಕೊಂದು ಮಹತ್ವದ ಕೊಡುಗೆಯಾದೀತು.