ಜಯ ಜಯ ಜಯ ಜಾನಕೀಕಾಂತ -ಕೀರ್ತನೆಯ ಸರಿಯಾದ ಪಾಠ, ಅರ್ಥ ಹಾಗೂ ಪಾರ್ತಿಸುಬ್ಬನ ಯಕ್ಷಗಾನದಲ್ಲಿನ ಉದ್ಧೃತಿ : ಸಮಗ್ರ ವಿಶ್ಲೇಷಣೆ

Abstract

ಕರ್ನಾಟಕ ಸಂಗೀತದ ಪಿತಾಮಹರೆಂದು ಖ್ಯಾತಿ ಪಡೆದ ಪುರಂದರದಾಸರು ರಚಿಸಿರುವ ಕೀರ್ತನೆಗಳು ಅನೇಕವಾಗಿ ದೊರೆತಿದ್ದು, ಅವುಗಳಲ್ಲಿ ‘ಜಯ ಜಯ ಜಯ ಜಾನಕೀಕಾಂತ’ ಎಂಬುದೂ ಒಂದಾಗಿದೆ. ಈ ಕೀರ್ತನೆಯು ಕನ್ನಡ ಲಿಪಿಯಲ್ಲಿ ಅನೇಕ ಬಾರಿ ಅಚ್ಚಾಗಿದೆ. ಎನ್. ಚನ್ನಕೇಶವಯ್ಯ ಅವರು ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ಸ್ವರ, ಅರ್ಥ ಮತ್ತು ತಾತ್ಪರ‍್ಯ ಸಹಿತವಾಗಿ ಪ್ರಕಟಿಸಿದ್ದಾರೆ. ಇನ್ನೂ ಅನೇಕರು ಇದನ್ನು ಮುದ್ರಿಸಿದ್ದಾರೆ. ಆದರೂ ಕೂಡ ಇದರ ಪಾಠ ಮತ್ತು ಅರ್ಥ ತೃಪ್ತಿಕರವಾಗಿಲ್ಲ. ಅಂತರ‍್ಜಾಲದಲ್ಲಂತೂ ಈ ಕೀರ‍್ತನೆಯ ಅರ್ಥ ಅಸಂಬದ್ಧವಾಗಿ ದೊರಕುತ್ತದೆ. ಪ್ರಕೃತ ಲೇಖನದಲ್ಲಿ ಈ ಕೀರ್ತನೆಯ ಪಾಠ ಮತ್ತು ಅರ್ಥದ ಬಗೆಗೆ ಬಾಹ್ಯಾಧಾರಗಳನ್ನು ಅವಲಂಬಿಸಿ ವಿಶ್ಲೇಷಿಸಲಾಗಿದೆ. ಇದೇ ಕೀರ್ತನೆಯು ಪಾರ್ತಿಸುಬ್ಬನ ‘ಪಟ್ಟಾಭಿಷೇಕ-ಪಂಚವಟಿ’ ಎಂಬ ಯಕ್ಷಗಾನ ಪ್ರಸಂಗದಲ್ಲಿಯೂ ಇರುವುದನ್ನು ನಮ್ಮ ಗಮನಕ್ಕೆ ಬಂದಂತೆ ಮೊದಲ ಬಾರಿಗೆ ಶೋಧಿಸ ಲಾಗಿದ್ದು, ಇದನ್ನೂ ಪಾಠನಿಷ್ಕರ್ಷೆಗೆ ಬಳಸಿಕೊಳ್ಳಲಾಗಿದೆ. ಈಗ ಪುರಂದರದಾಸರ ಕೀರ್ತನೆಗಳ ಪ್ರಚಲಿತವಿರುವ ಮುದ್ರಣಗಳಲ್ಲಿ ಈ ಕೀರ್ತನೆಯು ಯಾವ ರೀತಿ ಅಚ್ಚಾಗಿದೆ ಎಂಬುದನ್ನು ಕೆಳಗೆ ನೀಡಲಾಗಿದೆ. ಪುರಂದರದಾಸರ ಕೀರ್ತನೆಗಳ ನಾಲ್ಕು ಪರಿಷ್ಕೃತ ಎಂದು ಹೇಳಲಾಗುವ ಆವೃತ್ತಿಗಳು ನಮ್ಮ ಗಮನಕ್ಕೆ ಬಂದಂತೆ ಪ್ರಕಟವಾಗಿವೆ. ಇಲ್ಲಿ ಎರಡು ಪ್ರಮುಖ ಪರಿಷ್ಕೃತ ಎಂದು ಹೇಳಲಾಗುವ ಆವೃತ್ತಿ ಗಳ ಪಾಠವನ್ನು ಮಾತ್ರ ದಾಖಲಿಸಲಾಗಿದೆ {ಮಿಕ್ಕ ಆವೃತ್ತಿಗಳ ಪಾಠಗಳನ್ನು ವಿಶ್ಲೇಷಣೆಯಲ್ಲಿ ಸೂಚಿಸಲಾಗಿದೆ. ಇದಲ್ಲದೆ ಬೇರೆ ಬೇರೆ ಮುದ್ರಿತ ಆವೃತ್ತಿಗಳನ್ನೂ ಯಥೋಚಿತವಾಗಿ ಗಮನಿಸಲಾಗಿದೆ. ಇವುಗಳೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟಿನ ಎಂಟು ಸಂಪುಟಗಳನ್ನು ಹಾಗೂ ಚಕ್ರವರ‍್ತಿ ಶ್ರೀನಿವಾಸ ಗೋಪಾಲಾಚಾರ‍್ಯರ ಸಂಸ್ಕೃತ ಕನ್ನಡ-ನಿಘಂಟು ಶಬ್ದಾರ್ಥ ಕೌಸ್ತುಭದ ಆರು ಸಂಪುಟಗಳನ್ನು ಅರ್ಥವಿವರಣೆಗಾಗಿ ಯಥೋಚಿತವಾಗಿ ಬಳಸಿಕೊಳ್ಳಲಾಗಿದೆ. ತಮಿಳು ಪಾಠಸ್ವರೂಪ, ಕನ್ನಡ ಗ್ರಾಂಥಿಕವಾದ ಸ್ಖಾಲಿತ್ಯದ ಚಲನೆಯನ್ನೂ ದಾಖಲಿಸಲಾಗಿದೆ. ಈ ಲೇಖನವು ಕನ್ನಡ ಸಾಹಿತ್ಯ-ಯಕ್ಷಗಾನ ಪ್ರಪಂಚಕ್ಕಷ್ಟೇ ಅಲ್ಲದೆ ಸಂಗೀತ- ನೃತ್ಯಲೋಕದಲ್ಲಿ ಪ್ರಸಿದ್ಧವಾಗಿರುವುದರಿಂದ ಸಂಗೀತ ಮತ್ತು ನೃತ್ಯ ಕಲಾವಿದರಿಗೂ ಅನುಸರಣೀಯವಾದ, ಓದಬೇಕಾದ ಮಹತ್ವಪೂರ್ಣವಾದ ಅಧ್ಯಯನೀಯ ಅಂಶಗಳನ್ನು ಒಳಗೊಂಡಿದೆ. ಜೊತೆಗೆ ಪಾರ್ತಿಸುಬ್ಬನ ಯಕ್ಷಗಾನದಲ್ಲಿ ಬಳಸಲಾದ ರಾಗಗಳ ಹಿನ್ನೆಲೆಯಲ್ಲಿ ಆತನ ಕಾಲ ನಿಷ್ಕರ್ಷೆಯ ಭಾಗವೂ ಹೆಸರಾಂತ ಸಂಶೋಧಕ, ಶಾಸನ - ಲಿಪಿಶಾಸ್ತ್ರಕಾರರಾದ ಕಾರ್ತಿಕ್ ಎಸ್ ಅವರ ಈ ಸಂಶೋಧನ ಪ್ರಬಂಧದೊಳಗಿದೆ.