ಅಭಿನವಭೋಜ ಷಹಜಿಯ ರಾಗಲಕ್ಷಣಮು

Highlights

ಕರ್ನಾಟಕದ ಹೆಸರಾಂತ ಸಂಶೋಧಕರೂ, ವಿದ್ವಾಂಸರೂ ಆದ ಬೆಂಗಳೂರಿನ ಎಸ್. ಕಾರ್ತಿಕ ಅವರು ಅಧ್ಯಯನಕೃತಿಯೊಂದಕ್ಕೆ ಬರೆದ ಮುನ್ನುಡಿಯ ರೂಪದ ೧೭ಪುಟದ ಸಂಶೋಧನಲೇಖನವಿದು. ಪ್ರಕಟಿತ ಕೃತಿಯಲ್ಲಿಲ್ಲದ ಅದೆಷ್ಟೋ ಮಾಹಿತಿಗಳ ಪೂರ್ಣ ಆವೃತ್ತಿಯು ಇಲ್ಲಿದೆ.

Abstract

(ಅಭಿನವಭೋಜ ಷಹಜೀ ಮಹಾರಾಜರ ರಾಗಲಕ್ಷಣಮು : ಒಂದು ತೌಲನಿಕ ಅಧ್ಯಯನ-(ಲೇಖಕರು) ಬಿ. ಇ. ಕಮಲಕುಮಾರ್, ಅನುಗ್ರಹ ಪ್ರಕಾಶನ, ಬೆಂಗಳೂರು-೨೦೧೯) - ಈ ಕೃತಿಗೆ ಬರೆದಿರುವ ಭೂಮಿಕೆ ಇದಾಗಿದ್ದು, ಮುದ್ರಿತವಾದ ಅನಂತರ ಕೆಲವೊಂದು ಆಕರಗಳ ವಿವರಗಳನ್ನು ಸೇರ್ಪಡೆ ಮಾಡಲಾಗಿದೆ ಮತ್ತು ಸಣ್ಣಪುಟ್ಟ ತಿದ್ದುಪಡಿಗಳನ್ನು ಮಾಡಿ ಪರಿಷ್ಕರಿಸಲಾಗಿದೆ} ತಂಜಾವೂರನ್ನು ಆಳಿದ ಮರಾಠ-ಭೋಸಲೆ ಸಂತತಿಯ ಪ್ರತಿಭಾಶಾಲಿ ದೊರೆ ಅಭಿನವಭೋಜ ಬಿರುದಾಂಕಿತ ಎರಡನೆಯ ಷಹಜಿ ಯಿಂದ ತೆಲುಗು ಭಾಷೆಯಲ್ಲಿ ರಚಿತವಾಗಿರುವ ಕರ್ನಾಟಕ ಸಂಗೀತದ ಶಾಸ್ತ್ರಕೃತಿ ‘ರಾಗಲಕ್ಷಣಮು’ವನ್ನು ಕುರಿತಾದ ಅಧ್ಯಯನ, ನಮ್ಮ ಗಮನಕ್ಕೆ ಬಂದಂತೆ, ಕನ್ನಡ ಭಾಷೆಯಲ್ಲಿ ಇದುವರೆಗೂ ನಡೆದಿರಲಿಲ್ಲ (ರಾ. ಸತ್ಯನಾರಾಯಣ ಅವರು ಕರ್ಣಾಟಕ ಸಂಗೀತ ವಾಹಿನಿಯಲ್ಲಿ ರಾಗಲಕ್ಷಣಮುವನ್ನು ತೌಲನಿಕ ವಿಮರ್ಶೆಗಾಗಿ ಕೆಲಮಟ್ಟಿಗೆ ಬಳಸಿಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಇದರ ಬಗೆಗೆ ಬರಹಗಳೇ ಇಲ್ಲವೆಂದರೂ ನಡೆದೀತು). ಷಹಜಿಯ ಸಹೋದರನಾದ ತುಳಜನ ಸಂಗೀತ ಸಾರಾಮೃತದ ಬಗೆಗೆ ಮಾತ್ರ ರಾ. ಸತ್ಯನಾರಾಯಣ ಅವರು ಬರೆದಿದ್ದಾರೆ. ಇದನ್ನು ಹೊರತುಪಡಿಸಿ ತಂಜಾವೂರಿನ ಮರಾಠ ರಾಜರ ಸಂಗೀತ ಕೊಡುಗೆಯ ಬಗೆಗೆ ಕನ್ನಡ ಭಾಷೆಯಲ್ಲಿ ಯಾವುದೇ ಬರಹಗಳು ಇರಲಿಲ್ಲ. ಈ ಕೊರತೆಯನ್ನು ಮನಗಂಡ ಸಂಗೀತ ವಿದ್ವಾನ್ ಬಿ. ಇ. ಕಮಲಕುಮಾರ್ ಅವರು ಈ ಕೃತಿಯ ಬಗೆಗೆ ವಿಸ್ತೃತವಾದ ಅಧ್ಯಯನವನ್ನು ಡಾ. ಆರ್. ಶೇಷಶಾಸ್ತ್ರೀ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ಮೀರಾ ರಾಜಾರಾಂ ಪ್ರಾಣೇಶ್ ಅವರ ಸಹಮಾರ್ಗದರ್ಶನದಲ್ಲಿ ಕೈಕೊಂಡು, ಅದನ್ನು ಕುಪ್ಪಂನ ದ್ರಾವಿಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಪಿ.ಎಚ್‌ಡಿ ಪದವಿಯನ್ನು ಪಡೆದಿದ್ದಾರೆ. ಅವರ ಪಿ.ಎಚ್‌ಡಿ ನಿಬಂಧವೇ ಈಗ ಅಗತ್ಯಕ್ಕೆ ತಕ್ಕಂತೆ ಪರಿಷ್ಕೃತಗೊಂಡು ಪುಸ್ತಕರೂಪದಲ್ಲಿ ಪ್ರಕಟವಾಗಿದೆ. ಈ ಪುಸ್ತಕಕ್ಕೆ ಒಂದು ಭೂಮಿಕೆಯನ್ನು ಬರೆಯಬೇಕೆಂದು ಆರ್. ಶೇಷಶಾಸ್ತ್ರೀ ಅವರು ಅಭಿಮಾನದಿಂದ, ವಿಷಯ ದೃಷ್ಟಿಯಿಂದ ಮತ್ತು ಈ ಕ್ಷೇತ್ರದಲ್ಲಿ ಮಾಡಿರುವ ಅಲ್ಪಕೆಲಸದಿಂದ ಪ್ರಕೃತ ಲೇಖಕನಿಗೆ ಆದೇಶಿಸಿರುವ ಕಾರಣ, ಅದರಂತೆಯೇ ರಾಗಲಕ್ಷಣಮು ಕೃತಿಯನ್ನು ಮತ್ತು ಸಂಬಂಧಪಡುವ ಕೆಲವಂಶಗಳನ್ನು ವಿಶ್ಲೇಷಣೆಗೊಳಪಡಿಸಿ ಈ ಭೂಮಿಕೆಯನ್ನು ಬರೆಯಲಾಗಿದೆ. ಇದೊಂದು ಭೂಮಿಕೆಯೆಂದಷ್ಟೇ ಅಲ್ಲದೆ ವಿಸ್ತೃತ ಸಂಶೋಧನ ಪ್ರಬಂಧವೆನ್ನುವುದೇ ಈ ಪ್ರಕಟಣೆಯ ಹಿನ್ನೆಲೆಯಲ್ಲಿ ಪ್ರಮುಖ ಕಾರಣ.