ಮನೋಧರ್ಮ ಮರೆಯಾಗುತ್ತಿದೆ ನೃತ್ಯಮನೆಯೊಳಗೆ

Abstract

ನಾವು ಸಂಗೀತದವರು, ಹಾಡುವ ಪ್ರತೀ ಕೃತಿಗೂ ಮನೋಧರ್ಮಕ್ಕನುಗುಣವಾಗಿ ಸ್ವಂತ ಸ್ವರ-ಪ್ರಸ್ತಾರ, ತನಿ-ಆವರ್ತನಗಳನ್ನು ಹೊಸೆದು ಹಾಡಬಲ್ಲೆವು; ನುಡಿಸಬಲ್ಲೆವು. ಆದರೆ ಇದೇ ಸಾಧ್ಯತೆ ಭರತನಾಟ್ಯದಂತಹ ನೃತ್ಯಕ್ರಮದಲ್ಲೇಕಿಲ್ಲ? ಸ್ವ ಅಭ್ಯಾಸ ಮಾಡಿಕೊಳ್ಳುವುದಾದರೆ ಪರವಾಗಿಲ್ಲ. ಆದರೆ ಮಗ್ಗಿ ಉರುಹೊಡೆದಂತೆ ರಿಹರ್ಸಲ್‍ಗಳು ಮಾಡಿ, `ಫರ್ಪೆಕ್ಟ್' ಆಗಿಯೇ ರಂಗಕ್ಕೇರಬೇಕೆಂದರೆ ಅದರ ಆಯುಷ್ಯ ಎಷ್ಟು? ನೃತ್ಯಕ್ರಮಕ್ಕೆ ಪಕ್ಕವಾದ್ಯದವರ ಸಾಂಗತ್ಯದ ಹಿನ್ನೆಲೆಯಲ್ಲಿ ಒಂದಷ್ಟು ಪೂರ್ವ ತಯಾರಿಗಳಿರಬೇಕೇನೋ ನಿಜ. ಸಂಗೀತದವರಾಗಿ ನಾವೂ ಮಾಡುತ್ತೇವೆ. ಆದರೆ ಕಚೇರಿಯ ಹಂತಹಂತಕ್ಕೂ ಒಂದಿಷ್ಟು ಬದಲಾವಣೆಯಿಲ್ಲದೆ ಕಂಠಪಾಠ ಮಾಡಿಕೊಂಡು ಒಂದೇ ನೃತ್ಯವನ್ನು ಜೀವನದುದ್ದಕ್ಕೂ ಪ್ರಾಕ್ಟೀಸ್, ರಿಹರ್ಸಲ್ ಮಾಡುವುದಾದರೆ ಏನಿದೆ ಸ್ವಾರಸ್ಯ? `ಮಕ್ಕಳಿಗೆ ಸುಲಭವಾಗಬೇಕು' ಎಂಬ ಕಾರಣ ಕೊಡುವುದಾದರೆ ಯಾಕೆ ಪೂರ್ಣ ಕಲಿಯುವ ಮುಂಚೆಯೇ ರಂಗಕ್ಕೆ ಹತ್ತಿಸಬೇಕು? ಗ್ರೂಪ್‍ನಲ್ಲಿ ಮಾಡುವುದಾದರೆ ಏನೋ ಪರವಾಗಿಲ್ಲವೆನ್ನಬಹುದು. ಆದರೆ ಏಕವ್ಯಕ್ತಿಯ ನೃತ್ಯ ಪ್ರದರ್ಶನಕ್ಕೂ ಇದೇ ಜಾಯಮಾನವೆಂದರೆ ಹ್ಯಾಗೆ? ಅದಿರಲಿ, ಕಲಿಯುವಾಗ ಅಥವಾ ಕಲಿಸುವಾಗಲೂ ಶಿಕ್ಷಕರು, ಗುರುಗಳು ಇದೇ ವರ್ತನೆ ತೋರಿಸುತ್ತಾರಲ್ಲಾ! ಸಿದ್ಧ ಮಾದರಿಯ ಬೊಂಬೆಗಳನ್ನು ಮಾಡಿಡುವುದಾದರೆ ಕಲೆಗೆ ಏನು ಪ್ರಯೋಜನ? ಕೊರಿಯೋಗ್ರಫಿ ಎಂದರೆ ಇದೇನಾ? ಸಹೃದಯ ರಸಿಕನಿಗೆ ಸಿಗುವ ಕಲಾಸ್ವಾದವೇನು? ಸರಿ, ಕಲಾವಿದನಿಗೂ `ಬೋರ್' ಹೊಡೆಯುವುದಿಲ್ಲವೇ? ಅಷ್ಟಕ್ಕೂ ರಂಗದಲ್ಲೇ ಮನೋಧರ್ಮಕ್ಕನುಗುಣವಾದ ಕಲೆ ಸೃಷ್ಟಿ ಮಾಡುವ ಸಾಮಥ್ರ್ಯವಿಲ್ಲದವನು ಕಲಾವಿದ ಹೇಗಾದಾನು? ನೋಡಹೊರಟರೆ ನಮ್ಮದೂ ಶಾಸ್ತ್ರೀಯ; ನಿಮ್ಮದೂ ಶಾಸ್ತ್ರೀಯ; ಹೀಗಿದಾಗ್ಯೂ ಏಕೆ ಈ ಅಂತರ? ' ಎಂದು ಸ್ನೇಹಿತರ ಮಡದಿ ಪ್ರಶ್ನೆ ಮೇಲೆ ಪ್ರಶ್ನೆ ಮುಂದಿಟ್ಟಾಗ ಎಲ್ಲಿಲ್ಲದ ಕಸಿವಿಸಿ.