ಗಣಪತಿ ಶಬ್ದ

Abstract

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಹೊರಾವರಣದಲ್ಲಿ ನರ್ತನವಾಡುವ ನಾಟ್ಯಗಣಪತಿಯಂತೂ ಮತ್ತೂ ಆಂಗಿಕ-ಸಾತ್ತ್ವಿಕ ಸಮನ್ವಿತನಾಗಿ ಭಾವವ್ಯಂಜಕ. ಗಣಪತಿಯ ಕುರಿತಂತೆ ಸಾಕಷ್ಟು ತತ್ತ್ವ ಜಿಜ್ಞಾsಸೆ, ಗೀತ-ಕಾವ್ಯ-ನೃತ್ಯಪ್ರಸಕ್ತಿಗಳೂ ಹಾಗೆಯೇ ನೃತ್ಯಗಣಪತಿಯ ಕುರಿತೂ ಐತಿಹಾಸಿಕ ವಿವರಗಳು ಇರುವುದರಿಂದ ಅವುಗಳೆಲ್ಲದರ ಬಗೆಗೆ ಮತ್ತೊಮ್ಮೆ ಇಲ್ಲಿ ದಾಖಲಿಸುವ ಗಾತ್ರಭರಿತವಾದ ಕಾರ್ಯವು ಖಂಡಿತಾ ಗಣಪತಿಯ ಹೊಟ್ಟೆಯಂತೆಯೇ ಹಿರಿದು. ಇಲ್ಲಿ ಉಲ್ಲೇಖಿಸಲೇಬೇಕಾದದ್ದೆಂದರೆ, ಶಿಲ್ಪ ಮತ್ತು ನರ್ತನವು ಪರಸ್ಪರ ಕೊಡುಕೊಳ್ಳುವಿಕೆಯ ನೆಲೆಯಲ್ಲಿ ಪಡೆಯುವ ಉಪಕಾರಗಳನ್ನು.ನೃತ್ಯಾವಹವಾಗಿ ಗಣಪತಿಯನ್ನು ಕಾಣುವುದರಲ್ಲಿಯೂ ಹೊಸತನವು ಅಪೇಕ್ಷಿತ ವಿಚಾರ. ಬಹಳಷ್ಟು ಸಲ ಪ್ರಥಮಪೂಜಿತ, ವಿಘ್ನನಿವಾರಕನೆಂದಷ್ಟೇ ಸ್ತುತಿಗೆ ಮೀಸಲಾಗಿಯೋ ಇಲ್ಲವೇ ಕೆಲವೊಂದು ಜನಪ್ರಿಯ ಕತೆಗಳನ್ನು ಸಂಚಾರಿ ಅಭಿನಯಗಳಷ್ಟಕ್ಕೇ ಅಳವಡಿಸಿಕೊಳ್ಳುವುದಕ್ಕಷ್ಟೇ ಗಣಪತಿ ಸೀಮಿತವಾಗುತ್ತಾನೆ. ಹಸ್ತಗಳಲ್ಲಾದರೋ ಕಪಿತ್ಥ ಸಂಯುತ ಹಸ್ತ (ಕುಕ್ಷಿ ವಿನ್ಯಾಸ), ಅರಾಳ ಹಸ್ತ (ಕರ್ಣಗಾತ್ರ), ಕರಿಹಸ್ತ (ಮುಕುಲ, ಅರಾಳದಿಂದ ಸೊಂಡಿಲ ಮೊಗನೆಂಬ ಸಂಕೇತ), ತಾಮ್ರಚೂಡ (ಪಾಶಾಂಕುಶಧಾರಿ), ಉನ್ಮುಖವಾದ ಊರ್ಣನಾಭ ಮತ್ತು ಅಭಯ ಪತಾಕ ಹಸ್ತ (ಮೋದಕಪ್ರಿಯ) ಮುಂತಾದವುಗಳನ್ನು ಬಳಸಿ ಅಭಂಗದಲ್ಲಿ ಪಾದವಿನ್ಯಾಸವನ್ನು ನಡೆಸುವುದಕ್ಕಷ್ಟೇ ಗಣಪತಿಯ ಆಂಗಿಕ ಮಿತಿಗೊಳ್ಳುತ್ತಿರುವುದು ಸರ್ವವೇದ್ಯ. ಹಸ್ತ-ಮುದ್ರೆಗಳಿಂದಾಚೆಗೆ ಕಲೆಯಲ್ಲಿ ಸಾಧಿಸಬಹುದಾದ ಅಂಶಗಳು ಅನೇಕವಿದೆಯೆಂಬುದು ಬಲ್ಲೆವಷ್ಟೇ. ಹಾಸಸ್ಥಾಯಿಗೂ, ಹಾಸ್ಯರಸಕ್ಕೂ ಆತನೇ ಅಧಿಪತಿ ಎಂಬಲ್ಲಿ ನರ್ತನಸಮಯದಲ್ಲ್ಲಿ ಆತನನ್ನು ಬಳಸಿಕೊಳ್ಳಬಹುದಾದ ಸೂಕ್ಷ್ಮ ಇನ್ನಷ್ಟು ಸ್ಪಷ್ಟವಾಗುತ್ತದೆ. ಕೇವಲ ಸಂಕೇತರೂಪವಷ್ಟೇ ಅಲ್ಲದೆ ನಾಟ್ಯಶಾಸ್ತ್ರೋಚಿತವಾದ ಅಂಗೋಪಾಂಗ ಪ್ರತ್ಯಂಗಸಮನ್ವಯದಲ್ಲಿ ನರ್ತನರಂಗದಲ್ಲಿ ಗಣಪತಿಯನ್ನು ಕಟೆದರೆ ಈಗಾಗಲೇ ಶಿಲ್ಪಶಾಸ್ತ್ರದಲ್ಲಿ ಕಾಣುತ್ತಿರುವ ನಾಟ್ಯಗಣಪತಿಯ ಆಂಗಿಕ-ಸಾತ್ವಿಕ ಲೀಲಾವಿಶೇಷ ಸಾಕ್ಷಾತ್ಕಾರಗೊಳ್ಳುತ್ತದೆ.