ಜತಿ, ನೃತ್ಯಸಾಹಿತ್ಯವೆಂಬ ಅರ್ಥವಾಗದ ಅಳಲಿನಲ್ಲಿ ಅಭಿನಯಪಂಚಾಂಗದ ಆರ್ತಾಲಾಪ

ಸಂಪೂರ್ಣ ನೃತ್ಯಕಲಾವ್ಯಾಪಾರದ ಮೂಲಪಂಚಾಂಗ-ಅಭಿನಯ ಎಂಬುದು ನಿರ್ವಿವಾದ ವಿಷಯ. ಯಾಕೆಂದರೆ ಇದು ದೃಶ್ಯ-ಶುದ್ಧಾಂಗ ಚಾಕ್ಷುಷಯಜ್ಞ. ನೇತ್ರಾರಾಧನೆ ಅಥವಾ ಕಣ್‌ತಣಿವು ಈ ಕಲಾಯಜ್ಞ ಪರಮಪ್ರಯೋಜನ. ರೇಡಿಯೋ ಸಂಗೀತ ಇದೆ; ರೇಡಿಯೋ ನಾಟಕ ಇದೆ; ರೇಡಿಯೋ ನರ್ತನ..? ಆದ್ದರಿಂದಲೇ ಇದನ್ನು ಚಾಕ್ಷುಷಯಜ್ಞ ಎಂದು ಗುರುತಿಸಿದ್ದಾರೆ.ಬಣ್ಣ, ಬೆಳಕು, ಭಿತ್ತಿ, ಪರದೆ ಇತ್ಯಾದಿ ಬೆರಗುಗಳಿಲ್ಲದೇ ಭಾವಾಭಿನಯದ ಮೂಲಕ ರಸೋತ್ಕರ್ಷವನ್ನು ಸಹೃದಯನಲ್ಲಿ ಉಂಟುಮಾಡುವ ಮೂಲಸಾಮರ್ಥ್ಯ ಇರುವ ಏಕೈಕ ಶಿಷ್ಟಕಲೆ ಎಂದರೆ ನಾಟ್ಯ. ಬಾಹ್ಯ ಪರಿಕರಗಳ ಚಮತ್ಕೃತಿಯ ಸಹಾಯದಿಂದ ನೋಡುಗನನ್ನು ಮೋಡಿ ಮಾಡುವ ದೃಶ್ಯಕಲೆಗಳು ಹಲವಿದ್ದಾವೆ. ಆದರೆ ಮಾತಿನ ಸಹಾಯವೂ ಇಲ್ಲದೇ, ಮಾತು ಹೇಳಲೂ ಸೋಲುವ ಇನ್ನೊಂದೇ ಭಾವವನ್ನು ತನ್ನ ಹೃದಯದಲ್ಲಿ ಹುಟ್ಟಿಸಿಕೊಂಡು ಕಣ್ಣಲ್ಲಿ ಬೆಳಗಿ ಪ್ರೇಕ್ಷಕನಲ್ಲಿ ಸಂವಹಿಸುವ ಅಸಾಧಾರಣ ಅಭಿನಯ ಪ್ರಕ್ರಿಯೆಯ ಮಹತ್ತನ್ನು ಮನಗಂಡರೆ ಈಗ ನನ್ನ ಅಳಲು ಅರ್ಥವಾದೀತು !